ದುರ್ಗಾವತಿ
ಗೊಂಡ್ವಾನವನ್ನಾಳಿದ ಪ್ರಸಿದ್ಧ ರಾಣಿ. ಮಹೋಬ ಮತ್ತು ಕಾಲಂಜಾರ್ ಚಂದೇಲ ಕಿರಾತ್‍ರಾಯನ ಮಗಳು. ಗೊಂಡ್ವಾನದ ದೊರೆ ದಲಪತ್ ಸಾನೊಡನೆ ಸು. 1545ರಲ್ಲಿ ಈಕೆಯ ವಿವಾಹವಾಗಿತ್ತು. ಅನಂತರ ನಾಲ್ಕೇ ವರ್ಷಗಳಲ್ಲಿ ದಲಪತ್ ಸಾ ತೀರಿಕೊಂಡ. ರಾಣಿ ತನ್ನ ಮಗ ವೀರನಾರಾಯಣನನ್ನು ಸಿಂಹಾಸನದಲ್ಲಿ ಕೂರಿಸಿ ಅವನ ಪರವಾಗಿ ರಾಜ್ಯವಾಳತೊಡಗಿದಳು. ರಾಜ್ಯದ ಸರ್ವತೋಮುಖ ಉನ್ನತಿಗಾಗಿ ಶ್ರಮಿಸಿದಳು. ಕುದುರೆಸವಾರಿಯಲ್ಲೂ ಚಿರತೆಯ ಬೇಟೆಯಲ್ಲೂ ಯುದ್ಧದಲ್ಲೂ ಆಕೆ ನಿಸ್ಸೀಮೆಯಾಗಿದ್ದಳು.

ರಾಣಿ ದುರ್ಗಾವತಿಯ ರಾಜ್ಯದ ಮೇಲೆ 1564 ರಲ್ಲಿ ಮೊಗಲ್ ಸಮ್ರಾಟ ಅಕ್ಬರ್ ಕಣ್ಣಿಟ್ಟು, ತನ್ನ ಸೇನಾನಿ ಅಸಫ್ ಖಾನನ ನೇತೃತ್ವದಲ್ಲಿ ಅಲ್ಲಿಗೆ ಸೈನ್ಯವನ್ನು ಕಳುಹಿಸಿದ. ಇದನ್ನು ಸಮರ್ಥವಾಗಿ ಎದುರಿಸಲು ರಾಣಿ ದುರ್ಗಾವತಿ ಸರ್ವಸಿದ್ಧತೆ ಮಾಡಿಕೊಂಡಳು. ರಾಣಿ ತನ್ನ ಮಗ ಬೀರನಾರಾಯಣನನ್ನು ಕೂಡಿಕೊಂಡು 50,000 ಸೈನಿಕರೊಂದಿಗೆ ಮೊಗಲ್ ಸೈನ್ಯವನ್ನು ಎದುರಿಸಿದಳು. ರಾಜಧಾನಿಯ ಬಳಿಯಲ್ಲಿ ಘೋರ ಕದನ ನಡೆಯಿತು. ಮೊಗಲ್ ಸೇನೆ ಮೂರು ಬಾರಿ ಹಿಮ್ಮೆಟ್ಟಿತು. ಆದರೆ ಕೊನೆಯ ಬಾರಿ ಯುದ್ಧಮಾಡುತ್ತಿದ್ದಾಗ ರಾಜ ಬೀರನಾರಾಯಣ ಗಾಯಗೊಂಡ. ಆತನನ್ನು ಕೂಡಲೆ ಸುರಕ್ಷಿತ ಸ್ಥಳಕ್ಕೆ ಸಾಗಿಸಬೇಕಾಯಿತು. ರಾಣಿಯೊಂದಿಗೆ ಕೇವಲ ಮುನ್ನೂರು ಸೈನಿಕರಿದ್ದರು. ಆದರೂ ರಾಣಿ ಎದೆಗುಂದಲಿಲ್ಲ. ಮೊಗಲ್ ಸೈನ್ಯದ ಎದುರು ಕದನ ಮುಂದುವರಿಸಿದಳು. ವೈರಿಗಳ ಎರಡು ಬಾಣಗಳು ರಾಣಿಗೆ ತಗುಲಿದವು. ಅವಳು ತನ್ನ ಬಲಗೈ ಹಾಗೂ ಕುತ್ತಿಗೆಗೆ ಹೊಕ್ಕಿದ್ದ ಬಾಣಗಳನ್ನು ಬಲವಂತವಾಗಿ ಕಿತ್ತೆಸೆದಳು. ರಕ್ತಸ್ರಾವ ವಿಪರೀತವಾಗಿ ರಾಣಿ ಮೂರ್ಛೆ ಹೋದಳು. ಆಕೆ ಚೇತರಿಸಿಕೊಳ್ಳುವ ವೇಳೆಗೆ ವೈರಿಗಳು ಸುತ್ತುವರಿದಿದ್ದರು. ಅವರ ಕೈಗೆ ಸಿಕ್ಕಿಬಿದ್ದು ಅವಮಾನಿತಳಾಗುವ ಮುನ್ನ ತಾನೆ ತನ್ನ ಭರ್ಜಿಯಿಂದ ಇರಿದುಕೊಂಡು ರಾಣಿ ಪ್ರಾಣತ್ಯಾಗ ಮಾಡಿದಳು. ಮೊಗಲ್ ಸೈನ್ಯ ರಾಜಧಾನಿಯನ್ನು ಮುತ್ತಿತು ಆಗತಾನೆ ಚಿಕಿತ್ಸೆ ಪಡೆಯುತ್ತಿದ್ದ ರಾಜಕುಮಾರ ಧೈರ್ಯಗುಂದದೆ ಶತ್ರುವನ್ನು ಎದುರಿಸಿ ಕಾದಾಡಿದ. ಆದರೆ ಮೊಗಲರ ಬಲದ ಎದುರು ಬಹು ಕಾಲ ಯುದ್ಧ ಮುಂದುವರಿಸಲಾಗಲಿಲ್ಲ. ಅವನೂ ಯುದ್ಧದಲ್ಲಿ ತೀರಿಕೊಂಡ. ಗೊಂಡ್ವಾನ ಅಕ್ಬರನ ಸೇನೆಯ ವಶವಾಯಿತು. ಜೊತೆಗೆ ಚಿನ್ನ ಬೆಳ್ಳಿ ಆಭರಣಗಳೂ ನಾಣ್ಯಗಳೂ ಒಂದು ಸಾವಿರ ಆನೆಗಳೂ ಮೊಗಲರಿಗೆ ದಕ್ಕಿದವು. 
(ಎಚ್.ಆರ್.ಆರ್.ಬಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ